loader

ಇವತ್ತು ವಿಶ್ವ ತಂಬಾಕು ರಹಿತ ದಿನ         

ತಂಬಾಕು ಬೆಳೆಗಾರರಿಗೆ  ಅರಗು ಮತ್ತು ಸುಗಂಧ ಸಸ್ಯಗಳ  ಬಲ..!           

ತಂಬಾಕು ಪರ್ಯಾಯ ಕೃಷಿಗೆ ಕದಂಬ ಫೌಂಡೇಶನ್ ಬೆಂಬಲ ...! 

ಜಗತ್ತಿನಾದ್ಯಂತ ಪ್ರತೀ ವರ್ಷವೂ ಸುಮಾರು ಎಂಭತ್ತು ಲಕ್ಷ ಜನ ತಂಬಾಕಿನಿಂದಾಗಿ ಸಾಯುತ್ತಿದ್ದಾರೆ. ಕ್ಯಾನ್ಸರ್ ಎಂಬ ಭೀಕರ ಕಾಯಿಲೆಗೆ ತಂಬಾಕಿನ ಉಪಯೋಗವೂ ನೇರ ಕಾರಣವಾಗುತ್ತಿದೆ. ಹೀಗಾಗಿ ವಿಶ್ವ ಅರೋಗ್ಯ ಸಂಸ್ಥೆ ಈ ಬಗ್ಗೆ ತುಂಬಾ ಗಂಭೀರವಾಗಿ ಚಿಂತಿಸಿ ೧೯೮೭ ರಿಂದ ಜಗತ್ತಿನ ಗಮನ ಸೆಳೆಯಲು, ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮೇ ೩೧ ನೇ ತಾರೀಖನ್ನು 'ವಿಶ್ವ ತಂಬಾಕು ರಹಿತ ದಿನ' ಎಂದು ಘೋಷಿಸಿದೆ. ಜಗತ್ತಿನ ಸುಮಾರು ನೂರಾ ಮೂವತ್ತು ಕೋಟಿ ಜನ ಇವತ್ತು ತಂಬಾಕಿನ ಚಟಕ್ಕೆ ಒಳಗಾಗಿದ್ದಾರೆ ಮತ್ತು ಈ ಪೈಕಿ ಶೇಕಡಾ ೮೦ ರಷ್ಟು ಮಂದಿ ಬಡ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿಯೇ ಇದ್ದಾರೆ. ತಂಬಾಕಿನ ವಿರುದ್ಧ ನಿರಂತರ ಪ್ರಚಾರ ಜನಜಾಗೃತಿ ಮೂಡುತ್ತಿರುವುದರಿಂದ ಮತ್ತು ತಂಬಾಕು ಬಳಕೆಯನ್ನು ಕಡಿಮೆ ಗೊಳಿಸಲು ಜಗತ್ತಿನಾದ್ಯಂತ ಎಲ್ಲಾ ದೇಶಗಳ ಸರಕಾರಗಳು ಕಟ್ಟು ನಿಟ್ಟಿನ ಕಾನೂನುಗಳನ್ನು ಜಾರಿ ಮಾಡಿರುವುದರಿಂದ ತಂಬಾಕಿನ ಬಳಕೆ ದಿನೇ ದಿನೇ ಕಡಿಮೆಯಾಗುತ್ತಿರುವುದು ಸಂತೋಷದ ವಿಷಯವೇ... ಆದರೆ ತಂಬಾಕಿಗೆ ಬೇಡಿಕೆ ತಗ್ಗಿದಂತೆಲ್ಲಾ ಸಂಕಷ್ಟಕ್ಕೊಳಗಾಗುವುದು ಮಾತ್ರ ಅದುವರೆಗೆ ಈ ಬೆಳೆಯನ್ನೇ ನಂಬಿಕೊಂಡು ಬಂದ ತಂಬಾಕು ಬೆಳೆಗಾರ ರೈತ. 

 

ತಂಬಾಕು ನಿಷೇಧ ಒಳ್ಳೆಯದೇ. ಇದರಿಂದಾಗಿ ಪ್ರತೀ ವರ್ಷ  ಲಕ್ಷಾಂತರ ಜನರ ಪ್ರಾಣರಕ್ಷಣೆಯಾಗುತ್ತದೆ...  ಅದೂ ನಿಜವೇ. ಆದರೂ ಇದರಿಂದಾಗಿ ಲಕ್ಷಾಂತರ ತಂಬಾಕು ಬೆಳೆಗಾರರೂ ಸಂಕಷ್ಟಕ್ಕೆ ಒಳಗಾಗುತ್ತಾರೆಂಬುದೂ ಅಷ್ಟೇ ನಿಜ. ಹಾಗಾಗಿ ತಂಬಾಕು ಬೆಳೆಗಾರರಿಗೆ ಸೂಕ್ತ ಪರ್ಯಾಯ ಬೆಳೆಗಳ ಅಗತ್ಯ ಇದೆ. ಅದಕ್ಕಾಗಿ ಕದಂಬ ಫೌಂಡೇಶನ್ ಹಲವಾರು ಪರ್ಯಾಯ ಬೆಳೆಗಳನ್ನು ರಾಜ್ಯಕ್ಕೆ ಪರಿಚಯಿಸಿದೆ. ಅವುಗಳಲ್ಲಿ ಮಹತ್ವದ್ದು ಅರಗು ಕೃಷಿ. 

 

ಅರಗಿನ ಬಗ್ಗೆ, ಅದರ ಉಪಯೋಗಗಳ ಬಗ್ಗೆ, ಭಾರತೀಯರಿಗೆ ಸಾವಿರಾರು ವರ್ಷಗಳಿಂದಲೂ ಗೊತ್ತಿದೆ. ಅರಗು ಒಂದು ಬಗೆಯ ಕೀಟಗಳಿಂದ ಉಂಟಾಗುವ ಅಂಟಿನಂಥ  ವಸ್ತು. ಈ ಕೀಟಗಳು ಕೆಲವೊಂದು ನಿರ್ದಿಷ್ಟ ಸಸ್ಯಗಳ ತೊಗಟೆಗಳ ಮೇಲೆ ಬೆಳೆಯುತ್ತವೆ. ಇಂಗ್ಲೀಷಿನಲ್ಲಿ ಅರಗಿಗೆ Lac ಅಥವಾ Gum Lac ಅನ್ನುವ ಹೆಸರಿದೆ... ಅದೇವೇಳೆ ಸಂಸ್ಕೃತದಲ್ಲಿ ಅರಗಿಗೆ 'ಲಾಕ್ಷ' ಎಂಬ ಹೆಸರಿದೆ. ಅಂದರೆ ಇಂಗ್ಲೀಷಿನ ಈ Lac ಎಂಬ ಪದಕ್ಕೆ ಮೂಲವೇ ಸಂಸ್ಕೃತ. ಈ ಕೀಟಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಗಿಡಗಳ ಮೇಲೆ ಬೆಳೆಯುವುದರಿಂದ, ಪ್ರಾಚೀನ ಭಾರತೀಯರು ಇವುಗಳಿಗೆ ಲಾಕ್ಷ ಎಂದೇ ನಾಮಕರಣ ಮಾಡಿದರು. 

 

 ಅಥರ್ವ ವೇದದಲ್ಲೇ ಅರಗಿನ ಬಗ್ಗೆ ಸೂಕ್ತಗಳಿವೆ. ಅರಗು ಯಾವ ಗಿಡ ಮೇಲೆ ಸುಪುಷ್ಟವಾಗಿ ಬೆಳೆಯುತ್ತದೆ ಎಂಬ ಜ್ಞಾನ ವೇದಕಾಲೀನ ಭಾರತೀಯರಿಗಿತ್ತು. ಅರಗು ಬೆಳೆಗೆ ಪಾಲಾಶ ಮರವೇ ಸೂಕ್ತ ಅಂತ ಅಂತ ವೇದಃಗಳಲ್ಲೇ ಉಲ್ಲೇಖಗಳಿವೆ. ಅರಗನ್ನು ಬಣ್ಣಗಳ ತಯಾರಿಕೆಗೆ, ಹೊಳಪನ್ನು ನೀಡುವ ಪಾಲಿಶ್ ಗಳ  ತಯಾರಿಕೆಗೆ ಅನಾದಿ ಕಾಲದಿಂದಲೂ ಬಳಸಲಾಗುತ್ತಿತ್ತು. ಅದನ್ನು 'Shellac'ಎಂಬ ಅಂಟಿನ ತಯಾರಿಕೆಗೂ ಬಳಸಲಾಗುತ್ತದೆ. ಒಂದು ಕಾಲದಲ್ಲಿ ಇಡೀ ಜಗತ್ತಿಗೇ ಅರಗನ್ನು ಒದಗಿಸುತ್ತಿದ್ದ ಪ್ರಮುಖ ದೇಶ ಭಾರತವಾಗಿತ್ತು. ಆದ್ರೆ ರಾಸಾಯನಿಕ ಬಣ್ಣಗಳ ಆವಿಷ್ಕಾರದಿಂದ ಅರಗು ಮಹತ್ವ ಕಳೆದುಕೊಂಡಿತು. ಹಾಗಾಗಿ ಭಾರತ ಅರಗು ತಯಾರಿಕೆಯಲ್ಲಿ ಹಿಂದುಳಿಯಿತು. ಈಗ ಮತ್ತೆ ಅಪಾಯಕಾರಿ ರಾಸಾಯನಿಕ ಬಣ್ಣಗಳಿಗೆ ಬೇಡಿಕೆ ಕುಸಿಯುತ್ತ ಬಂದು ಸಹಜ, ಸಾವಯವ ಅರಗಿಗೆ ಮತ್ತೆ ಬೇಡಿಕೆ ಕುದುರಿದೆ. ಆಹಾರದಲ್ಲಿ ಉಪಯೋಗಿಸುವ ಬಣ್ಣಗಳ ತಯಾರಿಗೂ ಅರಗನ್ನು ಉಪಯೋಗಿಸಲಾಗುತ್ತಿದೆ. ಹಾಗಾಗಿ ಅರಗು ಕೃಷಿಗೆ ಮತ್ತೆ ಬೇಡಿಕೆ ಬಂದಿದ್ದು ಅರಗು ಲಾಭದಾಯಕ ಪರ್ಯಾಯ ಕೃಷಿಯಾಗಿದೆ. 

 

ಕದಂಬ ಫೌಂಡೇಶನ್ ಹತ್ತತ್ತಿರ ಕಳೆದ  ಏಳೆಂಟು ವರ್ಷದಿಂದ  ಕರ್ನಾಟಕ್ಕೆ ಅರಗು ಕೃಷಿಯನ್ನು ಮತ್ತೆ ಪರಿಚಯಿಸುವ ಉದ್ದೇಶದಿಂದ ಸತತವಾಗಿ ಕೆಲಸ ಮಾಡಿ ಯಶಸ್ವಿಯಾಗಿದೆ. ಹಾಗಾಗಿ ಇವತ್ತು ಕರ್ನಾಟಕದಲ್ಲಿ ಅರಗು ಕೃಷಿಗೆ ಪರ್ಯಾಯ ಹೆಸರೇ ಕದಂಬ ಫೌಂಡೇಶನ್ ಎನ್ನುವಂತಾಗಿದೆ. ಅರಗು ಕೃಷಿಗೆ ಬೇಕಾದ ಮೂಲ ಸೌಲಭ್ಯಗಳೆಲ್ಲವನ್ನೂ ಸಂಪೂರ್ಣ ಮಾಹಿತಿ, ತರಬೇತಿ, ಮತ್ತು ಅರಗು ಕೃಷಿಯಲ್ಲಿ ಬೀಜದಂತೆ ಉಪಯೋಗಿಸುವ 'ಬ್ರೂಡ್ ಲ್ಯಾಕ್' ನೊಂದಿಗೆ ರಾಜ್ಯದಲ್ಲಿ ಒದಗಿಸುವ ಏಕೈಕ ಸಂಸ್ಥೆ ಕದಂಬ ಫೌಂಡೇಶನ್ ಅಂದರೂ ತಪ್ಪಿಲ್ಲ. ಅರಗು ಕೃಷಿಯನ್ನು ಮತ್ತೆ ಕರ್ನಾಟಕದಲ್ಲಿ  ಜನಪ್ರಿಯಗೊಳಿಸಲು ಕದಂಬ ಫೌಂಡೇಶನ್ ವ್ಯಾಪಕ ಕ್ಷೇತ್ರ ಕಾರ್ಯ ಕೈಗೊಂಡಿದ್ದು, ಈಗಾಗಲೇ ರಾಜ್ಯದ ಹಲವಾರು ಭಾಗಗಳಲ್ಲಿ ರೈತರು ಅರಗನ್ನು ಪರ್ಯಾಯ ಬೆಳೆಯನ್ನಾಗಿ ಬೆಳೆಯತೊಡಗಿ ಯಶಸ್ವಿಯೂ  ಆಗಿದ್ದಾರೆ.

ಅರಗು ಕೃಷಿ ಕುರಿತಂತೆ ರಾಜ್ಯದಲ್ಲೇ ಪ್ರಪ್ರಥಮ  ಸಮ್ಮೇಳನ ೨೦೧೩ ರ ಜೂನ್ ತಿಂಗಳಲ್ಲಿ ಶಿರಸಿಯಲ್ಲೇ ಆಯೋಜಿಸಲಾಗಿತ್ತು. ಜಾರ್ಖಂಡ್ ನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರಲ್ ರೆಸಿನ್ಸ್ ಅಂಡ್ ಗಮ್ಸ್ ನಲ್ಲಿ ರಾಜ್ಯದ ರೈತರಿಗೆ, ಸರಕಾರೀ ಅಧಿಕಾರಿಗಳಿಗೆ, ಮತ್ತು ಕೃಷಿ ಸ್ವಯಂಸೇವಕರಿಗೆ ಮೊಟ್ಟಮೊದಲ ತರಬೇತಿ ಕಾರ್ಯಾಗಾರವನ್ನು ಕದಂಬ ಫೌಂಡೇಶನ್ ಆಯೋಜಿಸಿತ್ತು. ಬಳಿಕ ರಾಜ್ಯದಲ್ಲಿ ಬಹಳ ವ್ಯಾಪಕವಾಗಿ ರೈತರಿಗೆ ಅರಗು ಕೃಷಿಯ ತರಬೇತಿ ಕಾರ್ಯಾಗಾರಗಳನ್ನು ನಡೆಸಿ ರೈತರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಯಿತು. ಈ ಮಹತ್ವದ ಕಾರ್ಯಕ್ಕಾಗಿ ೨೦೧೬ರಲ್ಲಿ ರಾಂಚಿಯ  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರಲ್ ರೆಸಿನ್ಸ್ ಅಂಡ್  ಗಮ್ಸ್  ಅರಗು ಕೃಷಿಯನ್ನು ಜನಪ್ರಿಯಗೊಳಿಸಿದ್ದಕ್ಕಾಗಿ 'Lac Promotion Institutional Award -2016' ಅನ್ನು ನೀಡಿ ಗೌರವಿಸಿತು. 

ಧಾರವಾಡದ ಕೃಷಿ ವಿಜ್ಞಾನ ಕೇಂದ್ರ, ಧಾರವಾಡದ ಕೃಷಿ ವಿಶ್ವ ವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಮತ್ತು ಪ್ರಧಾನವಾಗಿ  ಜಾರ್ಖಂಡ್ ನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರಲ್ ರೆಸಿನ್ಸ್ ಅಂಡ್  ಗಮ್ಸ್ ನ ಸಹಕಾರದೊಂದಿಗೆ ಇವತ್ತು ಕದಂಬ ಫೌಂಡೇಶನ್ ರಾಜ್ಯದ ಅದರಲ್ಲೂ ಉತ್ತರಕನ್ನಡ ಜಿಲ್ಲೆಯ ಆದ್ಯಂತ ಅರಗು ಬೆಳೆಯನ್ನು ಜನಪ್ರಿಯ ಗೊಳಿಸಿದೆ. ಇವತ್ತು  ಉತ್ತರಕನ್ನಡ ಜಿಲ್ಲೆ ಮತ್ತು ಬೆಳಗಾವಿಯ  ಕೆಲ ಭಾಗಗಳಲ್ಲಿ ಒಟ್ಟು  ೨೧೪ ಕ್ಕೂ ಹೆಚ್ಚು  ಹೆಕ್ಟೇರ್ ಪ್ರದೇಶದಲ್ಲಿ ಅರಗು ಬೆಳೆಯಲಾಗುತ್ತಿದ್ದು, ಸುಮಾರು ೪೩೮ ಫಲಾನುಭವಿ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. 

. ಇವತ್ತು ಹುಣಸೂರು ಪಿರಿಯಾಪಟ್ಟಣ ಸೇರಿದಂತೆ ಮೈಸೂರಿನ ಹಲವು ಭಾಗಗಳಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ತಂಬಾಕು ಬೆಳೆಗಾರರಿಗೆ ಪರ್ಯಾಯ ಬೆಳೆಯನ್ನಾಗಿ ಅರಗನ್ನು ಕದಂಬ ಫೌಂಡೇಶನ್ ಪರಿಚಯಿಸಿದೆ. ತಂಬಾಕು ಕೃಷಿ ದಿನೇ ದಿನೇ ಸೊರಗುತ್ತಿರುವ ಈ ದಿನಗಳಲ್ಲಿ ಆ ಭಾಗದ ರೈತರಿಗೆ ಅರಗು ಒಂದು ಅತ್ಯುತ್ತಮ ಲಾಭದಾಯಕ ಪರ್ಯಾಯ ಬೆಳೆಯಾಗಿ ಕಂಡಿದೆ. ಹುಣಸೂರಿನ ಅರಸು ಕಲ್ಲಹಳ್ಳಿಯ ರೈತರಿಗೆ ಈ ಬಗ್ಗೆ ತರಬೇತಿ ನೀಡಿ ಅರಗು ಕೃಷಿಗೆ ಬೇಕಾದ ಎಲ್ಲ ಸಹಾಯವನ್ನೂ ಒದಗಿಸಲಾಯಿತು. ಬಳಿಕ ಆ ಭಾಗದ ಯಶಸ್ವಿಯಾಗಿ ಅರಗು ಕೃಷಿ ನಡೆಸಿ ಒಳ್ಳೆಯ ಇಳುವರಿಯನ್ನೂ ಪಡೆದರು.  ಬಳಿಕ ಉಳಿದ ಭಾಗದ ರೈತರೂ ಅರಹು ಕೃಷಿಯನ್ನು ಶುರು ಮಾಡಿದ್ದಾರೆ.  ಅರಗು ಕೃಷಿಗೆ ಬೇಕಾದ ಎಲ್ಲಾ ರೀತಿಯ ತರಬೇತಿ, ತಾಂತ್ರಿಕ ಸಹಕಾರ, ಬಿತ್ತನೆಗೆ 'ಬ್ರೂಡ್ ಲ್ಯಾಕ್' ಒದಗಣೆ ಜೊತೆಗೆ ಕೃಷಿಕರು ಬೆಳೆದ ಫಸಲಿಗೆ ಮಾರುಕಟ್ಟೆಯನ್ನೂ ಕದಂಬ ಫೌಂಡೇಶನ್ ಒದಗಿಸುತ್ತದೆ. 

ಇದರ ಜೊತೆಗೆ ತಂಬಾಕು ಬೆಳೆಗಾರರಿಗೆ ಪರ್ಯಾಯ ಬೆಳೆಯಾಗಿ ಸುಗಂಧ ಸಸ್ಯಗಳ ಕೃಷಿಯನ್ನೂ ಕೂಡಾ ಕದಂಬ ಪರಿಚಯಿಸಿದೆ. ಉತ್ತರ ಕನ್ನಡದ ಕೃಷಿಕರಿಗಾಗಿಯೇ ಕದಂಬ ರೂಪಿಸಿದ ಈ 'ಸುಗಂಧ ಸಸ್ಯಗಳ ಕೃಷಿ' ಯೋಜನೆಯಡಿ ಪಾಲ್ಮಾರೋಸಾ, ಸಿಟ್ರೋನೆಲ್ಲಾ, ಲೆಮನ್ ಗ್ರಾಸ್ ಮುಂತಾದ  ಹಲವಾರು ರೀತಿಯ ಸುಗಂಧ ಸಸ್ಯಗಳ ಕೃಷಿಯನ್ನು ಪರಿಚಯಿಸಿದೆ. ಮೈಸೂರು ಭಾಗದಲ್ಲಿ ಈಗಾಗಲೇ ಅನೇಕ ತಂಬಾಕು ಬೆಳೆಗಾರರು ಪರ್ಯಾಯವಾಗಿ ಪಾಲ್ಮಾ ರೋಸಾ ವನ್ನು ಬೆಳೆಯಲು ಪ್ರಾರಂಭಿಸಿದ್ದಾರೆ.. ಕದಂಬ ಸಂಸ್ಥೆ ಕೃಷಿಕರಿಗೆ ಸುಗಂಧ ಸಸ್ಯಗಳ ಕೃಷಿ ಬಗ್ಗೆ ತರಬೇತಿಯನ್ನೂ , ಅತ್ಯುತ್ತಮ ಗುಣಮಟ್ಟದ, ಅತ್ಯತ್ತಮ ತಳಿಯ ಸಸಿಗಳನ್ನೂ, ಬೀಜಗಳನ್ನೂ, ಮಣ್ಣಿನ ಸಹಜ ನೈಸರ್ಗಿಕ ಅರೋಗ್ಯ ಮತ್ತು ಫಲವತ್ತತೆಯನ್ನು ರಾಸಾಯನಿಕ ರಹಿತ ಸಾವಯವ ರೂಪದಲ್ಲಿ ಹೆಚ್ಚಿಸುವ ತಂತ್ರಜ್ಞಾನವನ್ನು, ತರಬೇತಿಯನ್ನು ಮತ್ತು ಗೊಬ್ಬರವನ್ನೂ ಒದಗಿಸುವುದರ ಜೊತೆಗೆ, ರೈತರು ಬೆಳೆದ ಬೆಳೆಗೆ ಒಳ್ಳೆಯ ಮಾರುಕಟ್ಟೆಯನ್ನೂ ಒದಗಿಸಿಕೊಡುತ್ತದೆ. ರೈತರ ಬೆಳೆಯನ್ನು ತಾನೇ ಖರೀದಿಸಿ ಪ್ರೋತ್ಸಾಹಿಸುತ್ತದೆ  ಕೂಡಾ... 

ತಂಬಾಕಿನಿಂದಾಗಿ ಜಗತ್ತಿನಲ್ಲಿ ಲಕ್ಷಾಂತರ ಮಂದಿ ಬಲಿಯಾಗುತ್ತಿರುವುದನ್ನು ತಪ್ಪಿಸಲು ನಾವು ಈ ಜಗತ್ತನ್ನೇ ತಂಬಾಕು ಮುಕ್ತ ಮಾಡುವತ್ತ ಗಮನ ಹರಿಸಲೇ ಬೇಕಿದೆ..ಹಾಗೆಯೇ  ಇವತ್ತು  ವಿಶ್ವ ತಂಬಾಕು ರಹಿತ ದಿನ ವಾಗಿರುವುದರಿಂದ, ಜನರಲ್ಲಿ ತಂಬಾಕಿನ ಕೆಡುಕುಗಳ ಬಗ್ಗೆ ಜಾಗೃತಿಯನ್ನೂ ಮೂಡಿಸಬೇಕಿದೆ.... ಆದರೆ ಜೊತೆಗೆಯೇ ತಂಬಾಕಿಗೆ ಕುಗ್ಗುತ್ತಿರುವ ಬೇಡಿಕೆಯಿಂದಾಗಿ ತಮ್ಮ ಜೀವನಾಧಾರವನ್ನೇ ಕಳೆದುಕೊಳ್ಳುತ್ತಿರುವ ತಂಬಾಕು ಬೆಳೆಗಾರರ  ಬಗ್ಗೆಯೂ ಯೋಚಿಸಬೇಕಿದೆ... ಅಲ್ಲವೇ...?

ಹಾಗಾಗಿ ಕದಂಬ  ಫೌಂಡೇಶನ್ ತಂಬಾಕಿಗೆ ಹಲವಾರು ಪರ್ಯಾಯ ಬೆಳೆಗಳನ್ನು ಪರಿಚಯಿಸಿ ರೈತರಿಗೆ ಈ ಕೃಷಿಯ ಬಗ್ಗೆ ಮಾಹಿತಿ, ತರಬೇತಿ, ಮತ್ತು ತಾಂತ್ರಿಕ ಸಹಕಾರವನ್ನೂ ನೀಡುತ್ತಿದೆ...ಇಂತಹ  ಕೃಷಿಯ ಬಗ್ಗೆ ಆಸಕ್ತಿ ಇರುವ ಯಾರೇ ಮುಂದೆ ಬಂದರೂ ಕದಂಬ ತನ್ನ ಸಹಾಯ ಹಸ್ತವನ್ನು ಸದಾ ಚಾಚುತ್ತದೆ.

..ಸ್ವತಹಾ ಕೃಷಿಕರು ಆದ ನಾವು ಯಾವತ್ತೂ ರೈತರ ಪರವೇ ಯೋಚಿಸುವಂಥವರು. ಕದಂಬ ಫೌಂಡೇಶನ್ ಅನ್ನು ಸ್ಥಾಪಿಸುವಾಗಲೂ ಈ ಸಂಸ್ಥೆಯನ್ನು ರೈತ ಕೇಂದ್ರಿತ ಸಂಸ್ಥೆಯಾಗಿಯೇ ಕಟ್ಟಿ ಬೆಳೆಸಬೇಕೆಂಬ ಕನಸು ಕಂಡಿದ್ದೆವು . ಕೆಲವೊಂದು  ವಿಷಯಗಳಲ್ಲಿ  ಹಿನ್ನಡೆಯಾದರೂ  ಒಮ್ಮೊಮ್ಮೆ ನಾವು ಯೋಚಿಸಿಯೇ ಇರದ  ಧನಾತ್ಮಕ ಬೆಳವಣಿಗೆಗಳು ಹೀಗೆಯೇ ಸ್ವಾಭಾವಿಕವಾಗಿಯೇ ಎಂಬಂತೆ ಸಂಭವಿಸುತ್ತವೆ. ಇದಕ್ಕೊಂದು ಉದಾಹರಣೆ ಅರಗು ಕೃಷಿ. ಅಂದಾಜು ೨೦೧೨ ನೇ ಇಸವಿಯ ಹೊತ್ತಿಗೆ ನಾವು  ಅರಗು ಕೃಷಿಯ ಬಗ್ಗೆ ಆಸಕ್ತಿ ತಳೆದು ಆ ಬಗ್ಗೆ ಒಂದಿಷ್ಟು ಸಂಶೋಧನೆ ನಡೆಸ ಹೊರಟಾಗ ನಮ್ಮ ಮನದಲ್ಲಿದ್ದದ್ದು ಕೇವಲ ಉತ್ತರಕನ್ನಡ ಜಿಲ್ಲೆಯ ಕೃಷಿಕರಷ್ಟೇ........ತಂಬಾಕು ಬೆಳೆಗಾರರಿಗೆ ಅರಗು ಪರ್ಯಾಯ ಬೆಳೆಯಾಗಿ ಸಹಾಯ ಮಾಡಬಹುದೆನ್ನುವ ಕನಿಷ್ಠ ಕಲ್ಪನೆಯೂ ಇರಲಿಲ್ಲ .  ಆದರೆ  ಇಂದು ಅರಗು ಅದೆಷ್ಟೋ ರೈತರ ಕೈಹಿಡಿಯುತ್ತಿದೆ... ಅದೇ ರೀತಿ ಸುಗಂಧ ಸಸ್ಯಗಳು ಕೂಡಾ...